ದೊಡ್ಡ ಗುಲಗಂಜಿ  -
	ಲೆಗ್ಯೂಮಿನೋಸೀ ಕುಟುಂಬದ ಮಿಮೊಸಾಯ್‍ಡೀ ಉಪಕುಟುಂಬಕ್ಕೆ ಸೇರಿದ ಒಂದು ವೃಕ್ಷ.  ಅಡೆನ್ಯಾಂತರ ಪ್ಯಾವೋನಿಯ ಇದರ ವೈಜ್ಞಾನಿಕ ಹೆಸರು. ಭಾರತ, ಬರ್ಮ, ಶ್ರೀಲಂಕಾ, ಫಿಲಿಪೀನ್ಸ್, ಆಸ್ಟ್ರೇಲಿಯ, ಚೀನ ಮುಂತಾದ ದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಭಾರತದಲ್ಲಿ ಇದು ಸಾಮಾನ್ಯವಾಗಿ ದಕ್ಷಿಣ ಭಾರತದ ಕಾಡುಗಳಲ್ಲೂ ಪಶ್ಚಿಮ ಘಟ್ಟದಲ್ಲೂ  ಹಿಮಾಲಯ ಪರ್ವತದ ತಪ್ಪಲು ಹಾಗೂ 4000 ಎತ್ತರದ ಪ್ರದೇಶಗಳಲ್ಲೂ ಕಂಡುಬರುತ್ತದೆ.  ಸಾಮಾನ್ಯವಾಗಿ ಇದು ತಂಪು ಮತ್ತು ತೇವ ಹೆಚ್ಚಾಗಿರುವ ಸ್ಥಳದಲ್ಲಿ ಚೆನ್ನಾಗಿ ಬೆಳೆಯುತ್ತದೆ.  ಇದನ್ನು ಕಾಂಡ ತುಂಡಿನಿಂದಲೂ ಬೀಜದಿಂದಲೂ ವೃದ್ಧಿಸಬಹುದು.

	ದೊಡ್ಡ ಗುಲಗಂಜಿ ಸಾಮಾನ್ಯವಾಗಿ 5 - 25 m.  ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ದ್ವಿಪಿಚ್ಛಕ ಮಾದರಿಯವು. ರೆಂಬೆಗಳ ತುದಿ ಇಲ್ಲವೆ ಎಲೆಗಳ ಕಕ್ಷಗಳಲ್ಲಿ ಮೂಡುವ ರೆಸಿóೀಮ್ ಮಾದರಿಯ ಹೂಗೊಂಚಲುಗಳಲ್ಲಿ ಹೂಗಳು ಸಮಾವೇಶಗೊಂಡಿವೆ.  ಹೂಗಳ ಬಣ್ಣ ಹಳದಿ.  ಹೂಗಳು ದ್ವಿಪಾಶ್ರ್ವ ಸಮಾಂಗತೆಯನ್ನು ತೋರುವುವು.  ಒಂದೊಂದು ಹೂವಿನಲ್ಲೂ 5 ಪುಷ್ಪಪತ್ರಗಳು, 5 ದಳಗಳು, 10 ಕೇಸರಗಳು ಹಾಗೂ ಒಂದೇ ಕಾರ್ಪೇಲಿನಿಂದ ರಚಿತವಾದ ಉಚ್ಚ ಸ್ಥಾನದ ಅಂಡಾಶಯ ಇವೆ.  ಕೇಸರಗಳು ಬಿಡಿಬಿಡಿಯಾಗಿವೆ.  ಫಲ ಪಾಡ್ ಮಾದರಿಯದು.  ಒಂದೊಂದರಲ್ಲೂ 8 - 15  ಬೀಜಗಳುಂಟು.  ಬೀಜಗಳ ಬಣ್ಣ ಅಚ್ಚಕೆಂಪು.

	ದೊಡ್ಡ ಗುಲಗಂಜಿಯನ್ನು ಸಾಲುಮರವಾಗಿ ಬೆಳೆಸುವುದುಂಟು.  ಅಲಂಕರಕ್ಕಾಗಿ ಉದ್ಯಾನವನಗಳಲ್ಲಿ ಬೆಳೆಸುವುದಿದೆ.  ಇದರ ಕಾಂಡವನ್ನು ಪುಡಿಮಾಡಿ ಕೆಂಪು ರಂಗಿನಂತೆ ಹಣೆಗೆ ಹಚ್ಚಲು ಉಪಯೋಗಿಸಲಾಗುತ್ತದೆ.  ಇದರ ಚೌಬೀನೆಯನ್ನು ಮರಮುಟ್ಟುಗಳ ತಯಾರಿಕೆಯಲ್ಲೂ ಕಟ್ಟುವುದಕ್ಕೂ ಬಳಸುವುದುಂಟು.  ಬೀಜಗಳಿಂದ ತೈಲ ತೆಗೆದು ಲಿಗ್ನೋಸಿರಿಕ್ ಆಮ್ಲವನ್ನು ತಯಾರಿಸುತ್ತಾರೆ.  ಬೀಜಗಳನ್ನು ಚಿನಿವಾರರು ತೂಕದ ಬಟ್ಟಾಗಿ ಉಪಯೋಗಿಸುವುದಿದೆ.  ಅಲ್ಲದೆ ಬೀಜಗಳಿಂದ ಕಂಠಹಾರಗಳನ್ನು ರಚಿಸುವುದೂ ಉಂಟು.
(ಟಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ